ಕಪಿಲೇಶ್ವರ ಗಜಪತಿ : ಸು.1435-70. ಒರಿಸ್ಸವನ್ನಾಳಿದ ಗಜಪತಿ ರಾಜವಂಶದ ಮೊದಲನೆಯ ದೊರೆ. ಪುರ್ವ ಗಂಗರ ಕೊನೆಯ ರಾಜನಾದ ನಾಲ್ಕನೆಯ ಭುವನೇಂದ್ರನ ಅನಂತರ ಒರಿಸ್ಸದ ಸಿಂಹಾಸನವನ್ನಾಕ್ರಮಿಸಿಕೊಂಡ (1453) ಕಪಿಲೇಂದ್ರನೆಂದೂ ಈತನ ಹೆಸರು. ಗಜಪತಿ, ಗೌಡೇಶ್ವರ ಮತ್ತು ನವಕೋಟಿ ಕರ್ಣಾಟ ಕಲವರಗೇಶ್ವರ ಎಂಬವು ಈತನ ಬಿರುದುಗಳು. ಈತ ಬಲು ಶಕ್ತ, ದಕ್ಷ, ಆಡಳಿತಕ್ಕೆ ಬಂದ ಕೂಡಲೇ ಆಂತರಿಕ ದಂಗೆಗಳನ್ನೆಲ್ಲ ಅಡಗಿಸಿದನಲ್ಲದೆ ರಾಜ್ಯವನ್ನು ಹೂಗ್ಲಿಯ ತಡಿಯಿಂದ ಕಾವೇರಿಯ ಮಡಿಲವರೆಗೂ ಹಬ್ಬಿಸಿ ಒರಿಸ್ಸದ ಕೀರ್ತಿ ಬೆಳೆಸಿದ. ಬಂಗಾಲದ ಕೆಲವು ಭಾಗಗಳು ಸು.1450ರಲ್ಲಿ ಇವನಿಗೆ ವಶವಾಗಿದ್ದವು. ಅನಂತರ ಈತ ಬಹಮನೀ ರಾಜ್ಯವನ್ನು ಮುತ್ತಿದ. 1465ರಲ್ಲಿ ಕಂಚಿಯನ್ನು ವಶಪಡಿಸಿಕೊಂಡು ತಿರುಚನಾಪಳ್ಳಿಯವರೆಗೂ ನುಗ್ಗಿದ. ಕಪಿಲೇಶ್ವರ ಪಗೋಡ ಎಂಬ ನಾಣ್ಯಗಳನ್ನು ಟಂಕಿಸಿ ಚಲಾವಣೆಗೆ ತಂದ. ಕಪಿಲೇಶ್ವರನ ಮರಣಾನಂತರ ಪುರುಷೋತ್ತಮ (1470-97) ಪಟ್ಟಕ್ಕೆ ಬಂದ. (ನೋಡಿ- ಪುರುಷೋತ್ತಮ-ಗಜಪತಿ) ಅನಂತರ ಬಂದ ದೊರೆ ಅವನ ಮಗನಾದ ಪ್ರತಾಪರುದ್ರ (1497-1540). (ನೋಡಿ- ಪ್ರತಾಪರುದ್ರದೇವ) ಸು. 1541ರಲ್ಲಿ ಈ ವಂಶದ ಆಡಳಿತ ಕೊನೆಗೊಂಡಿತು. ಭೋಯಿ ವಂಶ ಪ್ರಬಲವಾಯಿತು. (ನೋಡಿ- ಭೋಯಿ).	(ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ